ಗಜೇಂದ್ರಗಡ

ಧಾರವಾಡ ಜಿಲ್ಲೆಯ ರೋಣ ತಾಲೂಕಿನಲ್ಲಿರುವ ಒಂದು ಐತಿಹಾಸಿಕ ಸ್ಥಳ. ಉ.ಅ.15040', ಪೊ.,ರೇ,75055' ಮೇಲಿದೆ. ಹುಬ್ಬಳ್ಳಿ-ಸೊಲ್ಲಾಪುರ ಮೀಟರ್ ಗೇಜ್ ರೈಲುಮಾರ್ಗದ ಮೇಲೆ ಇರುವ ಮಲ್ಲಾಪುರ ರೈಲ್ವೆ ನಿಲ್ದಾಣದ ದಕ್ಷಿಣಕ್ಕೆ ಸು. 24 ಮೈ. ದೂರದಲ್ಲಿದೆ. ಗಜೇಂದ್ರಗಡವೆಂದರೆ ಗಜೇಂದ್ರನ ಕೋಟೆ. ಊರ ಬದಿಯಲ್ಲಿರುವ ಬೆಟ್ಟವೊಂದರ ಮೇಲಿರುವ ಭದ್ರವಾದ ಕೋಟೆಯಿಂದಾಗಿ ಊರಿಗೆ ಈ ಹೆಸರು ಬಂದಿದೆ. ಗಜೇಂದ್ರಗಡ ಕೋಟೆಯನ್ನು ಶಿವಾಜಿ ಕಟ್ಟಿಸಿದ. ಇದರ ಒಳಭಾಗದಲ್ಲಿ ಒಂದು ಮದ್ದಿನ ಮನೆಯೂ ಎರಡು ಕೊಳಗಳೂ ಇವೆ.

	ಈ ಊರಿನಲ್ಲಿರುವ ವಿರೂಪಾಕ್ಷ ದೇವಾಲಯ ಜೀರ್ಣಸ್ಥಿತಿಯಲ್ಲಿದೆ. ಅದರ ಸಭಾಮಂಟಪ ಅಪೂರ್ಣ. ದೇವಾಲಯ ದ್ವಾರದ ಮೇಲೆ ಸರಸ್ವತಿಯ ವಿಗ್ರಹವುಂಟು. ಊರಿನ ಹೊರಗೆ ದುದ್ಗಾದೇವಿಯ ದೇವಾಯಲಯವಿದೆ. ಇದು ಗೋಳಾಕಾರದ ಮುಚ್ಚಿಗೆಯಿಂದಲೂ ದುಂಡನೆಯ ಕಂಬಗಳಿಂದಲೂ ಕೂಡಿದೆ. ಊರಿನ ಶ್ಮಶಾನದ ಹತ್ತಿರ ಇರುವ ಹೊಲದಲ್ಲಿ ಒಂದು ರಾಮಲಿಂಗ ದೇವಾಯಲವಿದೆ. ಅದರಲ್ಲಿ ಮಂಟಪವೊ ದುಂಡನೆಯ ಕಂಬಗಳೂ ಉಂಟು. ನೇಕಾರರ ಕೇರಿಯಲ್ಲಿರುವ ದೇವಾಲಯ ರಾಮನದು. ಇದರಲ್ಲಿ ರಾಮ ಮತ್ತು ಸೀತೆಯ ವಿಗ್ರಹಗಳೂ ಗರ್ಭ ಗುಡಿಯ ಬಾಗಿಲವಾಡದ ಮೇಲೆ ಗಣಪತಿಯ ಮೂರ್ತಿಯೂ ಇವೆ. ಈ ದೇವಸ್ಥಾನವೂ ಅಪೂರ್ಣವಾಗಿದ್ದರೂ ಒಳ್ಳೆಯ ಸ್ಥಿತಿಯಲ್ಲಿದೆ. ಪಾಂಡುರಂಗ ದೇವಾಲಯ ಇನ್ನೊಂದು ಇದೂ ಪಾಳುಬಿದ್ದಿದೆ. ಇದರಲ್ಲಿ ಪಾಂಡರಂಗ-ರುಕ್ಮಣಿಯರ ಮೂರ್ತಿಗಳುಂಟು, ಬಾಗಿಲವಾಡದಮೇಲೆ ದ್ವಾರಕಾಬಾಯಿಯ ಮೂರ್ತಿಯನ್ನು ನೋಡಬಹುದು. ಗಜೇಂದ್ರಗಡದ ಸಮೀಪದಲ್ಲೇ ದೊಡ್ಡ ಗವಿಯೊಂದಿದೆ. ಇದೊಂದು ಯಾತ್ರಾಸ್ಥಳ.

	ಸಮೀಪದಲ್ಲೇ ಸದಾ ಪ್ರವಹಿಸುವ ಎರಡು ತೀರ್ಥಗಳುಂಟು. ಅಲ್ಲದೆ ಸುಮಾರು 15' ಎತ್ತರದ ಎರಡು ದೀಪಸ್ತಂಭಗಳಿವೆ. ಬಳಿಯಲ್ಲಿರುವ ವೀರಭದ್ರ ಗುಡಿಯ ಬಾಗಿಲುವಾಡದ ಮೇಲೆ ಗಾರೆಯಲ್ಲಿ ರಚಿಸಿದ ವರ್ಣಮಯ ಮೂರ್ತಿಗಳುಂಟು. ಗುಡಿಯ ಮುಂಭಾಗದಲ್ಲಿ ಅಂತರಗಂಗೆ ಎಂಬ ಸಣ್ಣ ಕೊಳವಿದೆ. ವೀರಭದ್ರನ ಗುಡಿಯಲ್ಲಿರುವ ಗವಿಯ ಉತ್ತರಕ್ಕೆ ಮತ್ತೆರಡು ಗವಿಗಳಿವೆ. ಇವೆರಡರ ಮಧ್ಯದಲ್ಲಿ ಗೋಡೆಯಿದೆ. ಈ ಗುಹೆಗಳಲ್ಲಿ ಎಣ್ಣೆಗೊಂಡ ಮತ್ತು ಆರ್ಷಗೊಂಡ ಎಂಬ ಎರಡು ತೀರ್ಥಗಳುಂಟು. ಕಲ್ಲೇಶ್ವರ ದೇವಸ್ಥಾನದಲ್ಲಿ ಬೆಳ್ಳಿಯ ಮುಲಾಮಿನಿಂದ ಕೂಡಿದ ಕಲ್ಲೇಶ್ವರಿ ಲಿಂಗವೊ ಬಾಗಿಲುವಾಡವೊ ಇವೆ. ಈ ಲಿಂಗದ ಎಡಭಾಗದಲ್ಲಿರುವುದು ಪಾತಾಳಗಂಗೆಯೆಂಬ ಹೊಂಡ. ಅಲ್ಲಿಯ ಸಣ್ಣ ಗೂಡೊಂದರಲ್ಲಿ ಬಸವಣ್ಣನ ಅಥವಾ ನಂದಿಯ ವಿಗ್ರಹವಿದೆ. ಇದು ದಿನೇದಿನೇ ಬೇಳೆಯುತ್ತಿದೆಯೆಂದು ಪ್ರತೀತಿ. ಮಕ್ಕಳಿಲ್ಲದ ಹೆಂಗಸರು ಈ ವಿಗ್ರಹಕ್ಕೆ ಹರಕೆ ಹೊತ್ತು ಇದನ್ನು ಪೂಜಿಸುತ್ತಾರೆ. ಇನ್ನೂ ಅನೇಕ ಗೂಡುಗಳಲ್ಲಿ ಲಿಂಗ ನಂದಿಯರ ವಿಗ್ರಹಗಳಿವೆ. ಕಾಲಕಾಲೇಶ್ವರಿ ದೇವಸ್ಥಾನದಲ್ಲಿ ಚಾಲುಕ್ಯ ನಾಲ್ಮಡಿ ಸೋಮೇಶ್ವರ, ಯಾದವ ಸಿಂಘಣ ಮತ್ತು ವಿಜಯನಗರದ ಇಮ್ಮಡಿ ಹರಿಹರದ ಆಳ್ವಿಕೆಗಳ ಕಾಲದ ನಾಲ್ಕು ಶಾಸನಗಳುಂಟು. ಆ ಶಾಸನಗಳಲ್ಲಿ ದೇವಸ್ಥಾನಕ್ಕೆ ಕೊಡಲಾದ ದಾನದತ್ತಿಗಳ ವಿವರಗಳಿವೆ. ಗಜೇಂದ್ರಗಡದ ಜನಸಂಖ್ಯೆ 15,539 (1971).    			(ಎಚ್.ಆರ್.ಆರ್.ಬಿ)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ